ಚಾಲ್ಕೊಪೈರೈಟಿಸ್-
ತಾಮ್ರದ ಪ್ರಮುಖ ಅದುರು; ರಾಸಾಯನಿಕ ಸಂಯೋಜನೆ ಅuಈeS2. ತಾಮ್ರದ ಪೈರೈಟಿಸ್ ಅಥವಾ ತಾಮ್ರದ ಹಳದಿ ಅದುರು ಎಂದೂ ಕರೆಯುವುದುಂಟು. ಬಣ್ಣದಲ್ಲಿ ಹಿತ್ತಾಳೆಯನ್ನು ಹೋಲುವ ಕಾರಣ ಹೆನ್‍ಕೆಲ್ ಎಂಬ ಖನಿಜಶಾಸ್ತ್ರಜ್ಞ ಇದನ್ನು ಚಾಲ್ಕೊಪೈರೈಟಿಸ್ ಎಂದು ಕರೆದ (1725). ಗ್ರೀಕ್‍ಭಾಷೆಯಲ್ಲಿ ಚಾಲ್ಕೊ ಎಂದರೆ ಹಿತ್ತಾಳೆ. ಬಹುಮಟ್ಟಿಗೆ ಈ ಖನಿಜ ಮಾತೃಶಿಲಾದ್ರವದಿಂದ ಹೊರ ಹೊಮ್ಮಿದ ಮೂಲ ಖನಿಜಗಳ ಗುಂಪಿಗೆ ಸೇರಿದೆ. ಮಾನ್‍ಜೋನೈಟ್, ಕ್ವಾಟ್ರ್ಸ್ ಮಾನ್‍ಜೊನೈಟ್ ಮೊದಲಾದ ಅಗ್ನಿ ಶಿಲೆಗಳಲ್ಲಿ ಇದು ಸಾಮಾನ್ಯವಾಗಿ ದೊರೆಯುತ್ತದೆ. ಪೆಗ್ಮಟೈಟ್ ಸಿರಗಳಲ್ಲಿಯೂ ಇದನ್ನು ಕಾಣಬಹುದು. ಡಾಲರೈಟ್ ಮುಂತಾದ ಒಡ್ಡುಶಿಲೆಗಳಲ್ಲಿಯೂ ಕಂಡುಬಂದಿದೆ. ಕೆಲವು ಸಲ ರೂಪಾಂತರಿತಶಿಲೆಗಳಲ್ಲಿಯೂ ದೊರೆಯುತ್ತದೆ. ಕಡಪ ಕಲ್ಲಿನಲ್ಲಿ ಇದರ ಗಂತಿಗಳನ್ನು ಕಾಣಬಹುದು. ಇದೇ ಅಲ್ಲದೆ ನೈಸ್ ಮತ್ತು ಷಿಸ್ಟ್ (ಪತ್ರಶಿಲೆ) ಮೊದಲಾದ ತೀವ್ರಬಗೆಯ ರೂಪಾಂತರಕ್ಕೊಳಗಾದ ಶಿಲೆಗಳಲ್ಲಿ ಕೂಡ ಇದು ಹುದುಗಿರುವುದುಂಟು. ಕೆಲವು ಬಾರಿ ಪ್ರತ್ಯಾಮ್ಲೀಯವರ್ಗದ ಸರ್ಪೆಂಟೈನ್ ಪದರುಶಿಲೆಗಳಲ್ಲಿ ಚಾಲ್ಕೊಪೈರೈಟಿಸ್ ಇರುತ್ತದೆ. ಅನೇಕ ಸಂದರ್ಭಗಳಲ್ಲಿ ಪೈರೈಟಿಸ್, ಬೋರ್ನೈಟ್, ಚಾಲ್ಕೊಸೈಟ್, ಟೆಟ್ರಹೀಡ್ರೈಟ್, ಮ್ಯಾಲಕೈಟ್, ಅಸ್ಯುರೈಟ್, ಕ್ಯುಪ್ರೈಟ್, ಸ್ಪ್ಯಾಲರೈಟ್, ಗ್ಯಲಿನ ಕ್ಯಾಸ್ಸಿಟರೈಟ್ ಮೊದಲಾದ ಖನಿಜಗಳೊಡನೆ ಬೆರೆತಿರುತ್ತದೆ. ಈ ಖನಿಜವಿರುವ ಮೂಲಶಿಲೆಗಳು ಕಾಲಕ್ರಮೇಣ ಶಿಥಿಲವಾಗಿಯೋ ಇತರ ಬಗೆಯ ಬದಲಾವಣೆಗಳಿಗೆ ಒಳಗಾಗಿಯೋ ಅವುಗಳಲ್ಲಿನ ಚಾಲ್ಕೊಪೈರೈಟಿಸ್ ಬೇರಾಗಿ ಅನುಷಂಗಿಕ ಖನಿಜವಾಗಿ ಮಾರ್ಪಡುವುದೂ ಉಂಟು. ಪ್ರಕೃತಿಯಲ್ಲಿ ಈ ಖನಿಜ ಚತುಷ್ಫಲಕೀಯ (ಟೆಟ್ರಾಗೊನಲ್) ವರ್ಗದ ಸ್ಫಟಿಕಗಳಾಗಿ ದೊರೆಯುತ್ತದೆ. ಕೆಲವು ಬಾರಿ ಈ ಸ್ಫಟಿಕವರ್ಗಕ್ಕೆ ಸೇರಿದ ಅವಳಿ ಹರಳುಗಳೂ ಕಂಡುಬರುವುದುಂಟು ಮತ್ತೆ ಕೆಲವು ಸಂದರ್ಭಗಳಲ್ಲಿ ನಿರ್ದಿಷ್ಟ ಒಳರಚನೆ ಇಲ್ಲದೆ ಮುದ್ದೆಯಾಗಿಯೋ ದ್ರಾಕ್ಷಿಗೊಂಚಲಿನಂತೆಯೋ ತಿಂಗಳವರೆ ಬೀಜಾಕಾರವಾಗಿಯೋ ತೋರಿಬರುವುದೂ ಇದೆ. ಇದರಲ್ಲಿ ಉತ್ತಮ ಸೀಳುಗಳಿವೆ. ಸೀಳಿನ ಜಾಡುಗಳನ್ನು ಕಷ್ಟವಿಲ್ಲದೆ ಗುರುತಿಸುವುದು ಸಾಧ್ಯ. ಅಸಮ ಮತ್ತು ಅಸ್ಪಷ್ಟ ಬಿರಿತವನ್ನೂ ನೋಡಬಹುದು. ಸುಲಭವಾಗಿ ಒಡೆದು ಪುಡಿಪುಡಿಯಾಗುತ್ತದೆ. ಖನಿಜದ ಕಾಠಿಣ್ಯಾಂಕ 3-5ರಿಂದ 4. ಅಂದರೆ ಪ್ರಯಾಸಪೂರ್ವಕವಾಗಿ ಚಾಕಿನಿಂದ ಗೀರು ಮಾಡಬಹುದು. ಸಾಪೇಕ್ಷ ಸಾಂದ್ರತೆ 4.1 ರಿಂದ 4.3ರ ವರೆಗೆ ಉಂಟು. ಲೋಹದ ಹೊಳಪನ್ನು, ಅದರಲ್ಲೂ ಆಗತಾನೆ ಬಿರಿತಕ್ಕೊಳಗಾದ ಖನಿಜ ಭಾಗದಲ್ಲಿ ಸ್ಪಷ್ಟವಾಗಿ ಕಾಣಬಹುದು, ಸಾಮಾನ್ಯವಾಗಿ ಈ ಹೊಳಪು ಕ್ರಮೇಣ ಮಾಯವಾಗಿ ಖನಿಜದ ಹೊರಮೈ ಮಂಕಾಗಿರುತ್ತದೆ. ಒಮ್ಮೊಮ್ಮೆ ವಾಯಮಂಡಲದಲ್ಲಿರುವ ಅನಿಲಗಳ ರಾಸಾಯನಿಕ ಕ್ರಿಯೆಗೆ ಒಳಗಾಗಿ ಕಣ್ಣು ಕೋರೈಸುವ ವಿವಿಧ ಬಣ್ಣಗಳನ್ನು ಖನಿಜದ ಮೇಲೆ ಕಾಣಬಹುದು.

ರಾಸಾಯನಿಕ ಸಂಯೋಜನೆಯಲ್ಲಿ ಇದು ತಾಮ್ರ ಮತ್ತು ಕಬ್ಬಿಣದ ಸಲ್ಫೈಡ್. ಇದರಲ್ಲಿ 35 ಗಂಧಕ, 34.5 ತಾಮ್ರ ಮತ್ತು 30.5 ಕಬ್ಬಿಣ ಇವೆ. ಹಲವು ವೇಳೆ ಪೈರೈಟೀಸ್ ಅಥವಾ ಸ್ವರ್ಣಮಕ್ಷಿಕಾ ಇದರೊಡನೆ ಬೆರೆತಿರುವುದುಂಟು. ಆಗ ಈ ಮೇಲಿನ ಪ್ರಮಾಣದಲ್ಲಿ ಏರುಪೇರುಗಳನ್ನು ಕಾಣಬಹುದು. ಈ ಮುಖ್ಯ ಧಾತುಗಳೇ ಅಲ್ಲದೆ ಅಲ್ಪ ಪರಿಮಾಣದಲ್ಲಿ ಚಿನ್ನ, ಬೆಳ್ಳಿ, ಸೆಲೆನಿಯಮ್ ಮತ್ತು ಥ್ಯಾಲಿಯಮ್ ಲೋಹ ಧಾತುಗಳು ಕೂಡ ಬೆರೆತಿರುತ್ತವೆ. ಅನೇಕ ಸಂದರ್ಭಗಳಲ್ಲಿ ಈ ಖನಿಜದ ಅದುರನ್ನು ಒಪ್ಪಮಾಡಿದಾಗ ಉಪವಸ್ತುಗಳಾಗಿ ಚಿನ್ನ ಮತ್ತು ಬೆಳ್ಳಿ ಲಾಭದಾಯಕ ಪರಿಮಾಣದಲ್ಲಿ ದೊರೆಯುವುದುಂಟು.

ಚಾಲ್ಕೊಪೈರೈಟಿಸ್ ಪ್ರಪಂಚದ ಅನೇಕ ಭಾಗಗಳಲ್ಲಿ ದೊರೆಯುತ್ತದೆ. ಇವುಗಳಲ್ಲಿ ಮುಖ್ಯವಾದವು ಚೆಕೊಸ್ಲೊವಾಕಿಯದ ಷ್ಲಾಗೆನ್‍ವಾಲ್ಡ್, ಬೊಹೀಮಿಯ ಮತ್ತು ಷೆಂನಿಟ್ಸ್. ಜರ್ಮನಿಯ ಸ್ಯಾಕ್ಸನಿ ಮತ್ತು ಫ್ರೀಬರ್ಗ್ ಗಣಿಗಳಲ್ಲಿ ಉತ್ತಮ ಬಗೆಯ ಹರಳುಗಳಾಗಿಯೂ ಹಾರ್ಸ್ ಪರ್ವತಶ್ರೇಣಿಗಳಲ್ಲಿ ಪೈರೈಟಿನೊಡನೆ ಬೆರೆತುಕೊಂಡೂ ಇದು ದೊರೆಯುತ್ತದೆ. ಇವಲ್ಲದೆ ಫ್ರಾನ್ಸ್, ಸ್ವೀಡನ್, ಇಂಗ್ಲೆಂಡ್, ಸ್ಫೇನ್, ಜಪಾನ್ ಮತ್ತು ಅಮೆರಿಕದ ಪೆನ್ಸಿಲ್ವೇನಿಯ, ಮಿಸೂರಿ, ಕೊಲರಾಡೋ, ಅರಿಜೋನ, ಮಾಂಟ್ಯನ, ಯೂಟಾ, ನೆವಾಡ, ಕ್ಯಾಲಿಫೋರ್ನಿಯ ಮತ್ತು ಅಲಾಸ್ಕ ಪ್ರಾಂತ್ಯಗಳಲ್ಲೂ ಕೆನಡದ ಬ್ರಿಟಿಷ್ ಕೊಲಂಬಿಯ, ಆಂಟೇರಿಯೋ ಮತ್ತು ಕ್ವಿಬೆಕ್ ಪ್ರಾಂತ್ಯಗಳಲ್ಲಿ ಉತ್ತಮ ದರ್ಜೆಯ ಚಾಲ್ಕೊಪೈರೈಟಿಸ್ ನಿಕ್ಷೇಪಗಳಿವೆ. ಇಲ್ಲೆಲ್ಲ ಗಣಿಗಾರಿಕೆ ಲಾಭದಾಯಕವಾದ ರೀತಿಯಲ್ಲಿ ಮುಂದುವರಿಯುತ್ತದೆ. ಭಾರತದಲ್ಲಿ ತಾಮ್ರದ ಅದುರಿನ ನಿಕ್ಷೇಪಗಳಿರುವ ರಾಜಸ್ತಾನದ ಖೇತ್ರಿ ಮತ್ತು ದರಿಬಾ, ಬಿಹಾರಿನ ರಾಖಾ ಮತ್ತು ಮೊಸಬಾನಿ, ಆಂಧ್ರಪ್ರದೇಶದ ಅಗ್ನಿಗುಂಡಲ, ತಮಿಳುನಾಡಿನ ಮಾಮಂದೂರು ಮತ್ತು ಕರ್ನಾಟಕದ ಅರಸೀಕೆರೆ ಬಳಿ ಇರುವ ಕಲ್ಯಾಡಿ ಮತ್ತು ಚಿತ್ರದುರ್ಗ ಜಿಲ್ಲೆಯ ಇಂಗಳದಹಾಳಿನಲ್ಲಿ ಚಾಲ್ಕೊಪೈರೈಟಿಸ್ ಸಾಕಷ್ಟು ಮೊತ್ತದಲ್ಲಿ ದೊರೆಯುತ್ತದೆ. ಇದರಿಂದ ತಾಮ್ರವನ್ನು ತಯಾರಿಸುವ ಉದ್ದೇಶದಿಂದ ಚಿತ್ರದುರ್ಗ ಕಾಪರ್ ಕಂಪೆನಿ ಸ್ಥಾಪನೆಗೊಂಡು ಕೆಲವು ಕಾಲ ಗಣಿ ಕಾರ್ಯಾಚರಣೆ ನಡೆಯಿತು.
(ಬಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ